ಫಾಂಡ, ಹೆನ್ರಿ
1905- ಹಾಲಿವುಡ್ ನಟ. ಹುಟ್ಟಿದ್ದು ನೆಬ್ರಾಸ್ಕ ಪ್ರಾಂತ್ಯದ ಗ್ರಾಂಡ್ ಐಲೆಂಡ್‍ನಲ್ಲಿ, 1905ರ ಮೇ 16ರಂದು. ಮಿನಿಸೋಟ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ. ಆಕಸ್ಮಿಕವಾಗಿ ರಂಗಪ್ರವೇಶಮಾಡಿ ಅದರಲ್ಲಿ ಆಳವಾದ ಆಸಕ್ತಿ ಬೆಳೆಸಿಕೊಂಡ. ಒಮಾಹ ಕಮ್ಯುನಿಟಿ ಪ್ಲೇಹೌಸಿನಲ್ಲಿ ರಂಗಪ್ರವೇಶವಾಯಿತು. (1925). ಹವ್ಯಾಸಿ ನಟನಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ. ಆಗಾಗ ನಿರ್ದೇಶಕನಾಗಿ, ರಂಗವಿನ್ಯಾಸಕಾರನಾಗಿ ದುಡಿದ. ದಿ ಗೇಮ್ ಆಫ್ ಲವ್ ಅಂಡ್ ಡೆತ್ ನಾಟಕದ ಸಣ್ಣ ಪಾತ್ರದ ಮೂಲಕ ಬ್ರಾಡ್ವೆ ರಂಗಕ್ಕೆ ಪ್ರವೇಶಿಸಿದ (1929). ಅಲ್ಲಿ ಈತ ಅಭಿನಯಿಸಿದ ಇತರ ಪ್ರಸಿದ್ಧ ನಾಟಕಗಳೆಂದರೆ ಐ ಲವ್ ಯು ವೆನ್ಸ್ ಡೆ (1932), ಫರ್ ಸೇಕಿಂಗ್ ಆಲ್ ಅದರ್ಸ್ (1933), ನ್ಯೂ ಫೇಸಸ್ (1934) ಇತ್ಯಾದಿ. ಇವನು ಅಭಿನಯಿಸುತ್ತಿದ್ದ ನಾಟಕ ದಿ ಫಾರ್ಮರ್ ಟೇಕ್ಸ್ ಎ ವೈಫ್ ಚಲನಚಿತ್ರವಾದಾಗ ಅದರಲ್ಲೂ ಅಭಿನಯಿಸಿ ಮೊತ್ತಮೊದಲಿಗೆ ತೆರೆಯಮೇಲೆ ಕಾಣಿಸಿಕೊಂಡ (1935). ತನ್ನ ವ್ಯಕ್ತಿತ್ವ ಹಾಗೂ ಅಭಿನಯ ಪ್ರತಿಭೆಯಿಂದಾಗಿ ಚಿತ್ರರಂಗದಲ್ಲಿ ಬಲವಾಗಿ ತಳವೂರಿ ಬಹುಕಾಲ ಯಶಸ್ವಿಯಾಗುಳಿದ. ತನ್ನ ಟ್ವೆಂಟಿಯತ್ ಸೆಂಚುರಿ ಫಾಕ್ಸ್ ಸಂಸ್ಥೆಯೊಂದಿಗೆ ಏಳು ವರ್ಷದ ಕರಾರು ಒಪ್ಪಂದದ ನಟನಾಗಿದ್ದ ಕಾಲವನ್ನು ಬಿಟ್ಟರೆ ಮಿಕ್ಕಂತೆ ಸ್ವತಂತ್ರ ನಟನಾಗಿಯೇ ಉಳಿದ. 

	ಎರಡನೆ ಜಾಗತಿಕ ಯುದ್ಧ ಮಿಕ್ಕಂತೆ ಸ್ವತಂತ್ರ ನಟನಾಗಿಯೇ ಉಳಿದ. ಹುದ್ದೆಗಳಲ್ಲಿ ಕೆಲಸಮಾಡಿದ. ವಾಯುದಳದ ಗೂಢಚಾರನಾಗಿ ಸೇವೆ ಸಲ್ಲಿಸಿ ಪದಕ ಪ್ರಶಸ್ತಿಗಳನ್ನು ಗಳಿಸಿದ. ಚಿತ್ರತಂಗದಲ್ಲಿ ಯಶಸ್ವಿಯಾಗಿದ್ದರೂ ನಾಟಕರಂಗದ ಅಭಿರುಚಿ ಕಳೆದುಕೊಳ್ಳಲಿಲ್ಲ. ಯುದ್ಧಾನಂತರ ಮತ್ತೆ ಬ್ರಾಡ್ವೆ ರಂಗದಲ್ಲಿ ಮಿಸ್ಟರ್ ರಾಬರ್ಟ್ (1948), ಟೂ ಫಾರ್ ದಿ ಸೀಸಾ (1958). ಕ್ರಿಟಿಕ್ಸ್ ಚಾಯ್ಸ (1960), ಎ ಗಿಫ್ಟ್ ಆಫ್ ಟೈಮ್ (1962) ನಾಟಕಗಳಲ್ಲಿ ಅಭಿನಯಿಸಿದ. 1971ರಲ್ಲಿ ಲಾಸ್ ಅಂಜಲೀಸಿನಲ್ಲಿ ದಿ ಕ್ವೆನ್ ಮ್ಯುಟಿನಿ ಕೋರ್ಟ್ ಮಾರ್ಷಲ್ ನಾಟಕದಲ್ಲಿ ಅಭಿನಯಿಸಿದ. ನಲವತ್ತು ವರ್ಷಗಳಿಂದ ಚಲನಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾನೆ. ಸೆರೆಯಿಂದ ಮರಳಿದವನ ಪಾತ್ರದಲ್ಲಿ ಯೂ ಒನ್ಲಿ ಲಿವ್ ಒನ್ಸ್ (1937), ಟೆಲಿಪೋನ್ ವೈರ್‍ಮನ್ ಆಗಿ ಸ್ಲಿಮ್ (1937), ಗೆರಿಲ್ಲ ಯೋಧನಾಗಿ ಬ್ಲಾಕೇಡ್ (1938). ಈತ ನಟಿಸಿದ ಆರಂಭಕಾಲದ ಚಿತ್ರಗಳು ಖ್ಯಾತ ನಿರ್ದೇಶಕ ಜಾನ್ ಫೋರ್ಡ್‍ನ ಬಿಗಿ ನಿರ್ದೇಶದಲ್ಲಿ ಈತ ಅಭಿನಯಿಸಿದ ಚಿತ್ರಗಳೆಂದರೆ ಯಂಗ್ ಮಿಸ್ಟರ್ ಲಿಂಕನ್ (1939), ಡ್ರಮ್ಸ್ ಅಲಾಂಗ್ ದಿ ಮೊಹಾಕ್ (1939), ಮೈ ಡಾರ್ಲಿಂಗ್ ಕ್ಲೆಮಂಟೈನ್ (1940), ದಿ ಗ್ರೇಪ್ದ್ ಆಫ್ ರಾತ್ (1940) ದಿ ಪ್ಯೂಜಿಡಮ್ (1947), ಫೋರ್ಟ್ ಅಪಾಚೆ (1948) ಹೌ ದಿವೆಸ್ಟ್ ವಾಸ ವನ್ (1962). ಜಾನ್ ಸ್ಟೇನ್ ಬೆಕ್ಕನ ಉತ್ತಮ ಕಾದಂಬರಿ ದಿ ಗ್ರೇಪ್ಸ್ ಆಫ್ ರಾತ್ ಚಿತ್ರವಾದಾಗ, ಅದರಲ್ಲಿ ಟಾಮ್ ಜೋಡ್‍ನ ಪಾತ್ರದಲ್ಲಿ ಫಾಂಡಾನ ಅಭಿನಯ ಅತ್ಯುತ್ತಮ ಮಟ್ಟದ್ದಾಗಿತ್ತು. ಆಸ್ಕರ್ ಪ್ರಶಸ್ತಿಗೂ ಇವನ ಹೆಸರು ಸೂಚಿತವಾಗಿತ್ತು. ವಸಾಹತು ಪ್ರಾರಂಭಕಾಲದ ಅರಾಜಕತೆ ಹಾಗೂ ಮೂವರು ಮುಗ್ಧರನ್ನು ನೇಣಿಗೆ ಹಾಕುವ ಕ್ರೂರ ಕಥೆಯಾದ ದಿ ಆಕ್ಸ್ ಬೊ ಇನ್‍ಸಿಡೆಂಟ್ (1942) ಚಿತ್ರದಲ್ಲಿ ಪರಕೀಯನ ಪಾತ್ರದಿಂದ ಇವನು ಅತ್ಯಂತ ಪ್ರಸಿದ್ಧನಾದ.

	1957ರಲ್ಲಿ ಸ್ವಂತ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿ ಈತ 12 ಆಂಗ್ರಿಮೆನ್ ಎಂಬ ಉತ್ತಮ ಚಿತ್ರವನ್ನು ನಿರ್ಮಿಸಿದ. ಅದರಲ್ಲಿ ಪಾತ್ರವನ್ನೂ ವಹಿಸಿದ್ದ. ಟೆಲಿವಿಷನ್ ನಟನೂ ಆಗಿದ್ದು ದಿ ಡೆಪ್ಯುಟಿ ಎಂಬ ಟಿವಿ ಕಥಾಮಾಲೆಯಲ್ಲಿ ಅಭಿನಯಿಸಿದ (1959). ಇವನ ಇತರ ಪ್ರಸಿದ್ಧ ಚಿತ್ರಗಳೆಂದರೆ ಜೆಸಿ ಜೇಮ್ಸ್ (1939), ದಿ ರಿಟರ್ನ್ ಆಫ್ ಫ್ರ್ಯಾಂಕ್ ಜೇಮ್ಸ್ (1940), ಟೇಲ್ಸ್ ಆಫ್ ಮ್ಯಾನ್ ಹ್ಯಾಟ್ಟನ್ (1942), ದಿ ಮೇಲ್ ಅನಿಮಲ್(1942), ಇಮ್ಮಾರ್ಟಲ್ ಸಾರ್ಜೆಂಟ್ (1942), ದಿ ಲಾಂಗ್ ನೈಟ್ (1947), ವಾರ್ ಅಂಡ್ ಪೀಸ್ (1956), ದಿ ಟೆನ್‍ಸ್ಟಾರ್ (1957), ವಾರ್ ಲಾಕ್ (1959), ದಿ ಲಾಂಗೆಸ್ಟ್ ಡೇ (1962), ಬ್ಯಾಟಲ್ ಆಫ್ ದಿ ಬಲ್ಜ್ (1966), ದಿ ಬಾಸ್ಟನ್ ಸ್ಟ್ರ್ಯಾಂಗ್ಲರ್ (1968), ದೇರ್ ವಾಸ್ ಎ ಕ್ರುಕೆಡ್ ಮ್ಯಾನ್ (1970), ಸಂ ಟೈಮ್ಸ್ ಎ ಗ್ರ್ರೇಟ್ ನೋಷನ್ (1971).

	ಐದು ಬಾರಿ ಮದುವೆಯಾದ. ಇವನ ಮೊದಲ ಪತ್ನಿ ತಾರೆ ಮಾರ್ಗರೆಟ್ ಸಲ್ಲವಾನ್ (ದಾಂಪತ್ಯ 1931-33). ಎರಡನೆ ಹೆಂಡತಿ ಫ್ರಾನ್ಸೆಸಳ ಇಬ್ಬರು ಮಕ್ಕಳೂ ಖ್ಯಾತ ತಾರೆಯಾಗಿದ್ದಾರೆ. ಮಗಳು ಜೇನ್ ಫಾಂಡ (1937-), ಮಗ ಪೀಟರ್ ಫಾಂಡ (1939-). ತಮ್ಮದೇ ಶೈಲಿಯ ಅಭಿನಯ ಹಾಗೂ ವ್ಯಕ್ತಿತ್ವದಿಂದ ಹೆಸರು ಮಾಡಿದ್ದಾರೆ. 		  (ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ